
3 ತಿಂಗಳವರೆಗಿನ ಶಿಶುಗಳಿಗೆ ಚಟುವಟಿಕೆಗಳು
ಈ ವಯಸ್ಸಿನಲ್ಲಿ ಮಕ್ಕಳು ತಮ್ಮ ಸುತ್ತಲೂ ಆರಾಮ, ಕಿರಿಕಿರಿ, ಖುಷಿ, ಬೇಸರ ತೋರಿಸುತ್ತವೆ. ಈ ಚಟುವಟಿಕೆಗಳು ನಿಮಗೆ ಮಗುವನ್ನು ಅರ್ಥ ಮಾಡಿಕೊಳ್ಳಲು ಮತ್ತು ಮಗುವಿಗೆ ಸುತ್ತಲಿನೊಂದಿಗೆ ಬೆರೆಯಲು ಸಹಾಯ ಮಾಡುತ್ತವೆ.
ಈ ಹಂತದಲ್ಲಿ ಮಗು ತಲೆ ಮತ್ತು ಕುತ್ತಿಗೆ ಹಿಡಿಯಲು ಕಲಿಯುತ್ತಿರುತ್ತದೆ. 3 ತಿಂಗಳಿಗೆ ಹೊಟ್ಟೆಯ ಮೇಲೆ ಮಲಗಿಸಿದರೆ ತಲೆ ಎತ್ತುತ್ತದೆ, ತಲೆ-ಕುತ್ತಿಗೆ ಮೇಲೆತ್ತುತ್ತದೆ. ಬೆನ್ನಿನ ಮೇಲೆ ಮಲಗಿ ಜೋರಾಗಿ ಕಾಲು ಒದೆಯುತ್ತದೆ, ಕೈಗಳನ್ನು ಹತ್ತಿರ-ದೂರ ಮಾಡುತ್ತದೆ.
ಗಿಲಕಿಯಂತಹ ಆಟಿಕೆಯನ್ನು ಮಗುವಿನ ಎದೆಯ ನೇರಕ್ಕೆ ಸುಮಾರು 10 ಇಂಚು (ಸುಮಾರು 25 ಸೆಂ.ಮೀ) ದೂರದಲ್ಲಿ ಹಿಡಿದು, ಸದ್ದು ಮಾಡಿ, ನಂತರ ಮಗುವಿಗೆ ಕೊಡಿ. ಮಗುವಿನ ಉತ್ಸಾಹ ನೋಡಿ, ಅದು ಬೇಗ ಬೇಗ ಕಾಲು ಒದೆದು ಆಟಿಕೆ ಹಿಡಿಯಲು ಪ್ರಯತ್ನಿಸಬಹುದು.
ಆಟಿಕೆ ಹಿಡಿಯಲು ಮಗುವಿಗೆ ಸಹಾಯ ಮಾಡಿ. ಬೇರೆ ಬೇರೆ ಮೇಲ್ಮೈಯ ಆಟಿಕೆ ಮತ್ತು ವಸ್ತುಗಳನ್ನು, ಉದಾ ಸ್ಪಂಜು ಅಥವಾ ನಯವಾದ ಕಲ್ಲು, ಮುಟ್ಟಲು ಕೊಡಿ, ಸ್ಪರ್ಶದ ಅರಿವು ಬೆಳೆಯುತ್ತದೆ. ವಸ್ತುಗಳು ಬಾಯಿಗೆ ಹೋಗದಷ್ಟು ದೊಡ್ಡವಿರಲಿ, ಯಾವಾಗಲೂ ಮಗುವಿನ ಹತ್ತಿರವೇ ಇರಿ.
ಮಕ್ಕಳು ಹೊಳೆಯುವ ವಸ್ತುಗಳ ಮೇಲೆ ಗಮನ ಕೊಟ್ಟು, ಅವು ಆಚೀಚೆ ಹೋದಂತೆ ಕಣ್ಣಿನಿಂದ ಹಿಂಬಾಲಿಸುತ್ತವೆ. ಕೆಂಪು, ಹಳದಿ, ಹಸಿರು ಗಾಢ ಬಣ್ಣದ ಆಟಿಕೆ ಬಳಸಿ. ಕಪ್ಪು-ಬಿಳಿ ದಪ್ಪ ಪಟ್ಟೆಗಳೂ ಒಳ್ಳೆಯದು. ಮಗುವಿನ ಗಮನ ಸೆಳೆಯಲು ಗಾಢ ಬಣ್ಣದ ಬಳೆ ಮತ್ತು ಬಟ್ಟೆ ಹಾಕಿ. ಮಗುವಿಗೂ ಬಣ್ಣದ ಬಳೆ ಹಾಕಬಹುದು, ಅದು ಅವನ್ನು ನೋಡುತ್ತದೆ. ನೆನಪಿಡಿ, ಮಗು ಸುಮಾರು ಒಂದು ಅಡಿ (ಸುಮಾರು 30 ಸೆಂ.ಮೀ) ದೂರದವರೆಗೆ ಮಾತ್ರ ಸ್ಪಷ್ಟವಾಗಿ ನೋಡುತ್ತದೆ, ಹಾಗಾಗಿ ಎಲ್ಲ ಚಟುವಟಿಕೆ ಈ ದೂರದಲ್ಲೇ ಮಾಡಿ.
ಮಗು ಕಣ್ಣಿನಿಂದ ಹಿಂಬಾಲಿಸಲು ಆಟಿಕೆಯನ್ನು ನಿಧಾನವಾಗಿ ಆಚೀಚೆ ಆಡಿಸಿ. ನೆನಪಿಡಿ, ಮಗು ಒಂದೆರಡು ನಿಮಿಷ ಮಾತ್ರ ಗಮನ ಕೊಡಬಲ್ಲದು. ಮುಖ ತಿರುಗಿಸಿದರೆ ಆಟ ನಿಲ್ಲಿಸಿ.
ಆದರೆ ಮಗುವಿಗೆ ಅತ್ಯುತ್ತಮ ಆಟಿಕೆ ನೀವೇ. ತಮಾಷೆಯ ಮುಖ ಮಾಡಿ, ತಮಾಷೆಯ ಮುಖವಾಡ ಹಾಕಿ, ಅದರ ಹಾವಭಾವ ನೋಡಿ. ಮಗು ನಿಮ್ಮ ಮುಖ ಮುಟ್ಟಲಿ, ಅದರ ಬೆರಳುಗಳ ಜೊತೆ ಆಡಿ. ಎಣ್ಣೆ ಮಸಾಜ್ ಮತ್ತು ಸ್ನಾನ ಮಾಡಿಸುವ ನಮ್ಮ ಸಂಪ್ರದಾಯ ಮಗುವಿನ ಜೊತೆ ಬಾಂಧವ್ಯಕ್ಕೆ ತುಂಬಾ ಒಳ್ಳೆಯ ಚಟುವಟಿಕೆ. ಮಗುವಿನ ಜೊತೆ ಮಾತಾಡಿ, ನಿಮ್ಮ ಧ್ವನಿ ಕೇಳುವುದು ಅದಕ್ಕೆ ತುಂಬಾ ಇಷ್ಟ, ಮತ್ತು ಮೃದುವಾದ, ಶಾಂತ ಸಂಗೀತ ಹಾಕಿ.
Totsguide ತಂಡದಿಂದ. ಈ ಲೇಖನ ಸಾಮಾನ್ಯ ಮಾಹಿತಿ; ನಿಮ್ಮ ಮಗುವಿನ ಬಗ್ಗೆ ಮಕ್ಕಳ ಡಾಕ್ಟರ್ ಜೊತೆ ಮಾತನಾಡಿ.


